ತೀರುವೆ ಬ್ಯಾಂಕುಗಳು -
	ಒಂದು ಪ್ರದೇಶಗಳಲ್ಲಿ ಅನೇಕ ಬ್ಯಾಂಕಿಂಗ್ ಕಚೇರಿಗಳು ವ್ಯವಹಾರ ನಡಸುತ್ತಿರುತ್ತವೆ. ಇವುಗಳ ಗ್ರಾಹಕರು ಪ್ರತಿದಿನವೂ ತಂತಮ್ಮ ಬ್ಯಾಂಕಿಂಗ್ ಕಚೇರಿಗಳ ಮೇಲೆ ಚೆಕ್ಕುಗಳನ್ನು ಬರೆದು ಇತರರಿಗೆ ಕೊಡುತ್ತಿರುವುದುಂಟು. ಈ ಚೆಕ್ಕುಗಳನ್ನು ಪಡೆದವರು ಆಯಾ ಬ್ಯಾಂಕುಗಳಿಂದ ನೇರವಾಗಿ ನಗದು ಪಡೆಯಬಹುದು; ಅಥವಾ ಅವರು ಆ ಚೆಕ್ಕುಗಳ ವಸೂಲಿಗಾಗಿ ತಂತಮ್ಮ ಬ್ಯಾಂಕುಗಳ ಲೆಕ್ಕಗಳಿಗೆ ಪಾವತಿ ಮಾಡಬಹುದು. ಚೆಕ್ಕನ್ನು ಪಾವತಿ ಮಾಡಬೇಕಾದ ಬ್ಯಾಂಕಿಂಗ್ ಕಚೇರಿಯೂ ವಸೂಲಿಗಾಗಿ ಚೆಕ್ಕನ್ನು ಪಡೆದ ಬ್ಯಾಂಕಿಂಗ್ ಕಚೇರಿಯೂ ಒಂದೇ ಆಗಿದ್ದರೆ ಆ ಕಚೇರಿ ಚೆಕ್ಕುಕರ್ತನ (ಡ್ರಾಯರ್) ಲೆಕ್ಕಕ್ಕೆ ಆ ಚೆಕ್ಕಿನ ಮೊಬಲಗನ್ನು ಋಣಿಸಿ (ಡೆಬಿಟ್). ಪ್ರಾಪ್ತಿಕರ್ತನ (ಪೇಯೀ ಲೆಕ್ಕಕ್ಕೆ ಅದನ್ನು ಧನಿಸುತ್ತದೆ. ಹಾಗಲ್ಲದೆ ಇವೆರಡೂ ಬ್ಯಾಂಕಿಂಗ್ ಕಚೇರಿಗಳು ಬೇರೆಬೇರೆಯಾಗಿದ್ದರೆ ಆಗ ವಸೂಲಿ ಬ್ಯಾಂಕು ಆ ಚೆಕ್ಕನ್ನು ಸ್ವೀಕರ್ತ ಬ್ಯಾಂಕಿಗೆ ವಸೂಲಿಗಾಗಿ ಕಳುಹಿಸಬೇಕಾಗುತ್ತದೆ. ಒಂದು ದಿನದಲ್ಲಿ ಇಂಥ ಹಲವಾರು ವಹಿವಾಟುಗಳು ಈ ನಾನಾ ಬ್ಯಾಂಕುಗಳ ನಡುವೆ ಪರಸ್ಪರವಾಗಿ ನಡೆಯುತ್ತಿರುತ್ತವೆ. ಆಗ ಇವುಗಳ ಪರಸ್ಪರ ಹೊಣೆಗಳ ಪಟ್ಟಿಮಾಡಿ ಅಂತಿಮವಾಗಿ ಯಾವ ಬ್ಯಾಂಕು ಯಾವ ಬ್ಯಾಂಕಿಗೆ ಇಷ್ಟು ಮೊಬಲಗು ಪಾವತಿ ಮಾಡಬೇಕಾಗುವುದೆಂಬುದನ್ನು ನಿರ್ಣಯಿಸಬೇಕಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನೇ ನಿರ್ಮಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ತೀರುವ ವ್ಯವಸ್ಥೆಯೆಂದು ಹೆಸರು. ಹಲವು ಬ್ಯಾಂಕುಗಳ ಪರವಾಗಿ ಒಂದು ಬ್ಯಾಂಕು ಈ ಕೆಲಸ ನಿರ್ವಹಿಸುತ್ತಿದ್ದರೆ ಅದನ್ನು ತೀರುವೆ ಬ್ಯಾಂಕ್ ಎನ್ನಬಹುದು. ವಾಣಿಜ್ಯ ಬ್ಯಾಂಕುಗಳಲ್ಲಿ ಕೆಲವನ್ನು ತೀರುವೆ ಬ್ಯಾಂಕುಗಳೆಂತಲೂ ಕರೆಯುತ್ತಾರೆ. ಒಂದು ಪ್ರದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳೂ ಆ ಪ್ರದೇಶಗಳ ಬ್ಯಾಂಕುಗಳ ತೀರುವೆ ಸಂಸ್ಥೆಯ ಸದಸ್ಯತ್ವ ಹೊಂದಿರುತ್ತವೆ. ಲಂಡನ್ನಿನ ತೀರುವೆ ಸಂಸ್ಥೆ ಜಗದ್ವಿಖ್ಯಾತವಾದ್ದು. ಬ್ರಿಟನ್ನಿನ ಹನ್ನೊಂದು ಪ್ರಮುಖ ಬ್ಯಾಂಕುಗಳಾದ ಮಿಡ್ಲೆಂಡ್, ಬಾಕ್ರ್ಲೇಸ್, ಲಾಯ್ಡ್ಸ್, ನ್ಯಾಷನಲ್ ಪ್ರೊವಿನ್ಷಿಯಲ್, ವೆಸ್ಟ್‍ಮಿನ್‍ಸ್ಟರ್, ಮಾರ್ಟಿನ್ಸ್, ಡಿಸ್ಟ್ರಿಕ್ಟ್, ವಿಲಿಯಮ್ಸ್ ಡೀಕನ್ಸ್, ನ್ಯಾಷನಲ್, ಕೌಟ್ಸ್ ಅಂಡ್ ಕೊ., ಗ್ಲಿನ್ ಮಿಲ್ಸ್ ಅಂಡ್ ಕೊ. - ಇವು ಈ ಸಂಸ್ಥೆಯ ಸದಸ್ಯತ್ವ ಪಡೆದಿವೆ. ಇವುಗಳಲ್ಲಿ ಮೊದಲನೆಯ ಐದು ಬ್ಯಾಂಕುಗಳು ದಿ ಬಿಗ್ ಫೈವ್ ಎಂದು ಪ್ರಸಿದ್ಧವಾಗಿವೆ. ಈ ಹನ್ನೊಂದು ಬ್ಯಾಂಕುಗಳನ್ನು ಮಾತ್ರ ತೀರುವೆ ಬ್ಯಾಂಕುಗಳೆಂದು ಕರೆಯುತ್ತಾರೆ. ತೀರುವೆ ವ್ಯವಸ್ಥೆ ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಇರುವುದಾದರೂ ಎಲ್ಲ ಬ್ಯಾಂಕುಗಳನ್ನು ತೀರುವೆ ಬ್ಯಾಂಕುಗಳೆಂದು ಕರೆಯುವುದಿಲ್ಲ. ತೀರುವೇ ಬ್ಯಾಂಕುಗಳು ಇತರ ಬ್ಯಾಂಕಿಂಗ್ ಕಾರ್ಯಗಳ ಜೊತೆಗೆ ಉಭಯ ಬ್ಯಾಂಕುಗಳ ನಡುವಿನ ಚೆಕ್ಕುಗಳ ತೀರುವೆ ಕಾರ್ಯವನ್ನು ಕೈಗೊಳ್ಳುತ್ತವೆ. ತೀರುವೆ ಕಾರ್ಯವೊಂದನ್ನೇ ನಿರ್ವಹಿಸುವ ಬ್ಯಾಂಕುಗಳಿರುವುದಿಲ್ಲ. ಬ್ರಿಟನ್ನಿನ ಹನ್ನೊಂದು ತೀರುವೆ ಬ್ಯಾಂಕುಗಳು ಎಲ್ಲ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನೂ ಮಾಡುತ್ತವೆ. 

	ತೀರುವೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪ್ರತಿಯೊಂದು ಬ್ಯಾಂಕಿಗೂ ಒಂದೊಂದು ಪ್ರತ್ಯೇಕವಾದ ಸ್ಥಳವನ್ನು ಗೊತ್ತುಪಡಿಸಲಾಗಿದೆ. ಆಯಾ ಬ್ಯಾಂಕಿನ ಮೇಲೆ ಬರೆದಿರುವ ಚೆಕ್ಕುಗಳನ್ನು ಆಯಾ ಸ್ಥಳಗಳಲ್ಲಿರುವ ಪ್ರತಿನಿಧಿಗಳಿಗೆ ಪಾವತಿ ಮಾಡಲಾಗುತ್ತದೆ. ಅಲ್ಲಿ ಚೆಕ್ಕುಗಳ ಪರಿಶೀಲನೆ ನಡೆದು, ಒಂದು ಬ್ಯಾಂಕು ಇನ್ನೊಂದು ಬ್ಯಾಂಕಿಗೆ ಕೊಡಬೇಕಾಗುವ ಮತ್ತು ಅದರಿಂದ ಪಡೆಯಬೇಕಾಗುವ ಮೊಬಲಗಿನ ಪಟ್ಟಿಯನ್ನು ತಯಾರಿಸಿ, ನಿವ್ವಳ ಮೊಬಲಗನ್ನು ನಮೂದಿಸಲಾಗುತ್ತದೆ. 

	ತೀರುವೆ ಸಂಸ್ಥೆ ಖಾಸಗಿ ಸಂಸ್ಥೆಯಾದರೂ ಕೇಂದ್ರೀಯ ಬ್ಯಾಂಕಿನ ಪ್ರತಿನಿಧಿ ಆ ಸಂಸ್ಥೆಯ ವ್ಯವಹಾರದಲ್ಲಿ ಹಾಜರಿರುವುದಕ್ಕೆ ಅವಕಾಶವಿದೆ. ನಿವ್ವಳ ಮೊಬಲಗನ್ನು ನಮೂದಿಸಿರುವ ಚೀಟಿಗೆ ಆ ಪ್ರತಿನಿಧಿ ಸಹಿ ಹಾಕಬೇಕು. ಒಂದು ಬ್ಯಾಂಕು ಇನ್ನೊಂದು ಬ್ಯಾಂಕಿಗೆ ನಿವ್ವಳವಾಗಿ ಎಷ್ಟು ಮೊಬಲಗು ಪಾವತಿ ಮಾಡಬೇಕೋ ಆ ಮೊಬಲಗಿಗೆ ಮೊದಲನೆಯ ಬ್ಯಾಂಕು ಕೇಂದ್ರೀಯ ಬ್ಯಾಂಕಿನ ಮೇಲೆ ಚೆಕ್ಕನ್ನು ಕೊಡುತ್ತದೆ. ಈ ರೀತಿ ಲೆಕ್ಕದ ಋಣ- ಧನವನ್ನು ಸರಿಹೊಂದಿಸಲಾಗುತ್ತದೆ. ಕೇಂದ್ರೀಯ ಬ್ಯಾಂಕಿನಲ್ಲಿ ಎಲ್ಲ ಬ್ಯಾಂಕುಗಳ ಲೆಕ್ಕಗಳೂ ಇರುತ್ತವೆ. ಕೇಂದ್ರೀಯ ಬ್ಯಾಂಕು ಆ ಮೊಬಲಗನ್ನು ಚೆಕ್ಕು ಕೊಟ್ಟ ಬ್ಯಾಂಕಿನ ಲೆಕ್ಕದಿಂದ ಚೆಕ್ಕು ಪಡೆದ ಬ್ಯಾಂಕಿನ ಲೆಕ್ಕಕ್ಕೆ ವರ್ಗಾಯಿಸುತ್ತದೆ. ತೀರುವೆ ಸಂಸ್ಥೆಗೆ ಸೇರದ ಬ್ಯಾಂಕುಗಳ ಮೇಲೆ ಕೊಡಲಾಗಿರುವ ಚೆಕ್ಕುಗಳೂ ತೀರುವೆ ಬ್ಯಾಂಕಿನ ಮುಖಾಂತರವೇ ತೀರುವೆಯಾಗಬೇಕು. 

	ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ದಿನಕ್ಕೆ ಎರಡು ಬಾರಿ ತೀರುವೆ ಕೆಲಸ ನಡೆಯುತ್ತದೆ. ಲಂಡನ್ ನಗರ ಬ್ಯಾಂಕುಗಳಲ್ಲಿ ಮಧ್ಯಾಹ್ನ 2-30ರಿಂದ 3-30ರ ವರೆಗೆ ಚುರುಕಿನ ಕಾಲ, ಮಧ್ಯಾಹ್ನದ ತೀರುವೆಗೆ ಬಂದ ಚೆಕ್ಕುಗಳನ್ನು ಜೋಡಿಸಿ, 3-45ರ ಹೊತ್ತಿಗೆ ತೀರುವೆ ಸಂಸ್ಥೆಯ ಕಚೇರಿಗೆ ರವಾನಿಸುತ್ತಾರೆ. ಅಲ್ಲಿ ಚೆಕ್ಕುಗಳ ವಿಲೇವಾರಿ ನಡೆದು, ಪಾವತಿ ಮಾಡಿದ ಚೆಕ್ಕುಗಳೊಂದಿಗೆ ಪುನಃ 4-30 ರ ವೇಳೆಗೆ ಬ್ಯಾಂಕುಗಳ ಪ್ರತಿನಿಧಿಗಳು ಹಾಜರಾಗುತ್ತಾರೆ. ಸಂಜೆ 5 ಗಂಟೆಯ ಹೊತ್ತಿಗೆ ಚೆಕ್ಕಿನ ಪಾವತಿಯ ಸ್ಥಿತಿ ಗೊತ್ತಾಗುತ್ತದೆ. ಕೆಲವು ಕಡೆಗಳಲ್ಲಿ ದಿನಕ್ಕೆ ಒಂದೇ ಸಾರಿ ತೀರುವೆ ನಡೆಯುತ್ತದೆ. ಒಂದೇ ಮೊಹಲ್ಲಾದಲ್ಲಿರುವ ಬ್ಯಾಂಕುಗಳು ತಮ್ಮ ಬ್ಯಾಂಕುಗಳ ಮೇಲೆ ಬರೆದ ಚೆಕ್ಕುಗಳನ್ನು ಆ ಮೊಹಲ್ಲಾದಲ್ಲೇ ತೀರುವೆ ಮಾಡಿಕೊಳ್ಳುವುದುಂಟು. ಇದರಿಂದ ಕಾಲ ಉಳಿತಾಯವಾಗುವುದಲ್ಲದೆ ತೀರುವೆಯ ಕಾರ್ಯವೂ ಸುಲಭವಾಗುತ್ತದೆ.  					(ಎನ್.ಜಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ